ನಿಃಶ್ರೇಯಸ -
	ನೀಶ್ರೇಯಸ ಎಂದರೆ ಮೋಕ್ಷ. ಅದೇ ಸತ್, ಚಿತ್, ಆನಂದವೆಂದು ವರ್ಣಿಸಲ್ಪಟ್ಟಿರುವ ಆತ್ಮದ ನಿಜಸ್ವರೂಪ. ಆದರೆ ಆತ್ಮಕ್ಕೆ ಭೌತ ಶರೀರ ಕೂಡಿದಾಗ, ಮನುಷ್ಯನಲ್ಲಿ ಆಸೆಗಳು ಹುಟ್ಟುತ್ತವೆ. ದುಷ್ಕರ್ಮಗಳಿಂದ ದುಷ್ಫಲಗಳನ್ನೂ ಸತ್ಕರ್ಮಗಳಿಂದ ಸತ್ಫಲಗಳನ್ನೂ ಮನುಷ್ಯ ಅನುಭವಿಸಬೇಕಾಗುತ್ತದೆ. ಆದ್ದರಿಂದಲೇ ವೇದಗಳಲ್ಲಿ ವಿಧಿ, ನಿಷೇಧಗಳನ್ನು ಹೇಳಲಾಗಿದೆ. ಆದರೆ ಈ ಕರ್ಮಫಲಗಳೆಲ್ಲವು ಅನಿತ್ಯವೇ, ಅವುಗಳಿಂದ ಸ್ವರ್ಗಸುಖವೇ ಲಭಿಸಬಹುದಾದರೂ ಅದೂ ಅನಿತ್ಯವೇ. ಆದ್ದರಿಂದಲೇ ನಿತ್ಯವಾದ ಆನಂದವನ್ನು ಅಪೇಕ್ಷಿಸುವ ಮನುಷ್ಯ ಬಾಹ್ಯವಾದ ಐಹಿಕ ಮತ್ತು ಸ್ವರ್ಗಸುಖದ ಆಸೆಯನ್ನು ತೊರೆಯಬೇಕಾಗುತ್ತದೆ. ಇದು ಅಕಾಮವೆನಿಸುತ್ತದೆ. ಕರ್ಮಗಳಲ್ಲಿ ತೊಡಗಿದ್ದರೂ ಫಲಾಪೇಕ್ಷೆ ಮಾಡುವ ಕರ್ಮವನ್ನು ನಿಷ್ಕಾಮಕರ್ಮವೆನ್ನುತ್ತಾರೆ. ಇಂಥ ವ್ಯಕ್ತಿಗೆ ಇರಬೇಕಾದ ಒಂದೇ ಒಂದು ಅಪೇಕ್ಷೆ ಆತ್ಮದ ನಿಜಸ್ವರೂಪವಾದ ಆನಂದವನ್ನು ಅನುಭವಿಸುವುದು. ಇದನ್ನು ಆತ್ಮಕಾಮವೆನ್ನುತ್ತಾರೆ. ಬಾಹ್ಯ ವಿಷಯಗಳ ಆಸೆಯನ್ನು ತೊರೆದು ಆತ್ಮದಲ್ಲಿಯೇ ಆನಂದವನ್ನು ಕಾಣುವುದಕ್ಕೆ ಆಪ್ತಕಾಮವೆಂದು ಹೆಸರು. ಕಾಮ್ಯಕರ್ಮಗಳಿಂದ ಬಿಡುಗಡೆಯನ್ನು ಹೊಂದಿ ನಿಜಸ್ವರೂಪವಾದ ಆನಂದವನ್ನು ಅನುಭವಿಸುವ ಸ್ಥಿತಿಗೆ ನಿಃಶ್ರೇಯಸವೆಂದು ಹೆಸರು. ಇದನ್ನು ಪಡೆಯಲು ಮನುಷ್ಯ ಪೂರ್ವಭಾವಿಯಾಗಿ ಶಾರೀರಿಕ ಮತ್ತು ಮಾನಸಿಕ ಪರಿಶುದ್ಧತೆಯನ್ನು ಸಾಧಿಸಬೇಕು. ಅದಕ್ಕಾಗಿ ಅವನು ಇಂದ್ರಿಯ ನಿಗ್ರಹ (ಶಮ), ಮನೋ ನಿಗ್ರಹಗಳನ್ನು (ದಮ) ಅಭ್ಯಾಸಮಾಡಿ, ಅದರಿಂದ ಆಗಬಹುದಾದ ಭೌತಿಕ ಕಷ್ಟವನ್ನು ತಡೆದುಕೊಳ್ಳುವ ಶಕ್ತಿಯನ್ನು (ತಿತಿಕ್ಷಾ) ತನ್ನಲ್ಲಿ ರೂಢಿಸಿಕೊಂಡು ಮನಸ್ಸನ್ನು ಆತ್ಮದ ಮೇಲೆ ಕೇಂದ್ರೀಕರಿಸಿ ತನ್ನ ಅಸ್ತಿತ್ವ ಅದರಲ್ಲಿ ನೆಲೆಯೂರಿದೆಯೆಂಬ ಅರಿವನ್ನು (ಸಮಾಧಿ) ಪಡೆಯಬೇಕು.

	ನಿಃಶ್ರೇಯಸಕ್ಕೆ ಸಂಬಂಧಿಸಿದ ವಿವರಗಳು ಬೃಹದಾರಣ್ಯಕ, ಛಾಂದೋಗ್ಯ, ಈಶಾವಾಸ್ಯ, ಕಠ, ಮುಂಡಕ ಉಪನಿಷತ್ತುಗಳೇ ಮುಂತಾದೆಡೆಗಳಲ್ಲಿ ದೊರೆಯುತ್ತವೆ.
(ಜಿ.ಎಸ್.ಆರ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ